ನಾಯಕರ್, ಇ ವಿ ರಾಮಸ್ವಾಮಿ
1879-1973. ತಮಿಳುನಾಡಿನ ದ್ರಾವಿಡ ಕಳಗಂ ನಾಯಕ; ಪೆರಿಯಾರ್ ಎಂದು ಹಲವರ ಗೌರವ ಅಭಿಮಾನಗಳನ್ನು ಗಳಿಸಿದ್ದವರು. 1879ರ ಸಪ್ಟಂಬರ್ 17 ರಂದು ಈರೋಡಿನಲ್ಲಿ ಶ್ರೀಮಂತ ಕುಟುಂಬದಲ್ಲಿ ಹುಟ್ಟಿದವರು. ತಂದೆ ವೆಂಕಟಪ್ಪ ನಾಯಕರ್, ತಾಯಿ ಚನ್ನತಾಯಿ ಅಮ್ಮಾಳ್. ಮಗನಲ್ಲಿ ಸಂಪ್ರದಾಯ ನಿಷ್ಠೆಯನ್ನು ಬೆಳೆಸಲು ತಂದೆ ತಾಯಿ ತುಂಬಾ ಶ್ರಮಪಟ್ಟರು. ಆದರೆ ಅವರು ಚಿಕ್ಕಂದಿನಿಂದಲೂ ಸ್ವತಂತ್ರ ಮನೋಧರ್ಮವನ್ನೇ ಪ್ರದರ್ಶಿಸುತ್ತಿದ್ದರು. ಶಾಲೆಯ ವಿದ್ಯಾಭ್ಯಾಸಕ್ಕೆ ಅವರು ಅನರ್ಹರೆಂದು ತೀರ್ಮಾನಿಸಿದ್ದರಿಂದ ಅವರಿಗೆ 10 ವರ್ಷ ಆಗಿರುವಾಗಲೇ ಅದನ್ನು ಬಿಡಬೇಕಾಯಿತು. ತಂದೆತಾಯಿಯರು ಅವರನ್ನು ವ್ಯಾಪಾರದಲ್ಲಿ ಹಚ್ಚಿದರು. ಅವರಿಗೆ ಹತ್ತೊಂಬತ್ತು ವರ್ಷವಾಗಿದ್ದಾಗ ಸೋದರಿಕೆಯ ಸಂಬಂಧದಲ್ಲೇ ಮದುವೆ ಮಾಡಿದರು. ಅವರ ಪತ್ನಿ ನಾಗಮ್ಮಾಳ್‍ಗೆ ಆಗ ಹದಿಮೂರು ವರ್ಷ.

ಬಡವರ, ಅಸ್ಪøಶ್ಯರ ಬಗ್ಗೆ ಅವರು ತುಂಬಾ ಕಾಳಜಿ ತೋರಿಸುತ್ತಿದ್ದರು. ಅವರು ಧರ್ಮಗ್ರಂಥಗಳನ್ನೋದಿದರು. ಪಂಡಿತರೊಂದಿಗೆ ಚರ್ಚಿಸಿದರು. ಅವರ ಜ್ಞಾನ ಬೆಳೆಯಿತು. ಮತೀಯ ವಿಚಾರಗಳಲ್ಲಿ ಮನೆಮಾಡಿಕೊಂಡಿದ್ದ ವಿರೋಧಾಭಾಸಗಳು ಅವರ ನಿಶಿತಮತಿಗೆ ಸಮ್ಮತವಾಗಲಿಲ್ಲ. ಸತ್ಯಾನ್ವೇಷಿಯಾಗಿ ಅವರು ಉತ್ತರಪ್ರದೇಶದ ಯಾತ್ರೆ ಮಾಡಿದರು. ಅವರ ಆರೋಗ್ಯ ಕೆಟ್ಟಿತು. ಅವರ ನಂಬಿಕೆ ಬಃಳ ಮಟ್ಟಿಗೆ ಶಿಥಿಲವಾಯಿತು. ಸಮಾಜಸುಧಾರಣೆಯ ಹಳೆಯ ಮಾರ್ಗಗಳೆಲ್ಲ ಅಸಮರ್ಪಕವೆಂದು ಅವರಿಗೆ ಮನವರಿಕೆಯಾಯಿತು. ಇದಕ್ಕೆ ಹೊಸ ವಿಧಿವಿಧಾನಗಳೇ ಅಗತ್ಯವೆಂದು ತೀರ್ಮಾನಿಸಿಕೊಂಡರು.

ಅವರ ಸಾರ್ವಜನಿಕ ಜೀವನ ಈರೋಡಿನಲ್ಲಿ ಆರಂಭವಾಯಿತು. ಅಲ್ಲಿನ ಪುರಸಭೆಗೆ ರಾಮಸ್ವಾಮಿ ನಾಯಕರು ಆಯ್ಕೆ ಹೊಂದಿದರು. ಅವರು ಸಾಮಾಜಿಕ ಅಸಮತೆಗಳನ್ನು ಕಿತ್ತೊಗೆಯುವ ಸಂಕಲ್ಪ ಮಾಡಿದರು. ಅಸ್ಪøಶ್ಯತೆಯನ್ನು ತೊಡೆದುಹಾಕಲು ಸಮರ ಹೂಡಿದರು. ಪುರಸಭೆಯಲ್ಲಿ ಅವರ ದಕ್ಷತೆಗೆ ಪುರಸ್ಕಾರ ಲಭಿಸಿತು. ಅವರು ಅದರ ಅಧ್ಯಕ್ಷರಾದರು. ಸ್ವಾತಂತ್ರ್ಯ ಚಳುವಳಿಯ ಸುಳಿಯೊಳಕ್ಕೂ ಅವರು ಸಿಲುಕಿದರು. ಸಿ. ರಾಜಗೋಪಾಲಾಚಾರಿಯವರ ಆಹ್ವಾನದಂತೆ ಅವರು ಕಾಂಗ್ರೆಸ್ಸನ್ನು ಸೇರಿದರು. 1920 ರಲ್ಲಿ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿ ಕಾರಾಗೃಹ ಸೇರಿದರು. 1922ರಲ್ಲಿ ಮದ್ರಾಸ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಅವರ ಆಯ್ಕೆಯಾಯಿತು. ಆದರೆ ಅವರ ವಿರುದ್ಧ ಮಂಡಿಸಲಾದ ಅವಿಶ್ವಾಸ ನಿರ್ಣಯದಿಂದ ಅವರಿಗೆ ಅಧಿಕಾರ ದಕ್ಕಲಿಲ್ಲ. ತಿರುವಾಂಕೂರಿನ ವೈಕೋಂ ದೇವಾಲಯದ ಬೀದಿಗೆ ಹರಿಜನರ ಪ್ರವೇಶ ನಿರ್ಬಂಧದ ವಿರುದ್ಧ ನಡೆದ ಸತ್ಯಾಗ್ರಹದಲ್ಲಿ ಅವರು ವಹಿಸಿದ ಪಾತ್ರ, ಕಾಂಗ್ರೆಸ್ಸು ನಡೆಸುತ್ತಿದ್ದ ಗುರುಕುಲವೊಂದರಲ್ಲಿ ಬ್ರಾಹ್ಮಣೇತರರ ವಿರುದ್ಧದ ಪಕ್ಷಪಾತ ಧೋರಣೆಗೆ ಅವರ ಪ್ರತಿಭಟನೆ, ಹಿಂದುಳಿದ ವರ್ಗಗಳಿಗೆ ಆಡಳಿತದಲ್ಲೂ ವಿಧಾನಸಭೆಯಲ್ಲೂ, ಸ್ಥಾನಗಳ ಮೀಸಲಾತಿಗಾಗಿ ಅವರ ಪ್ರಯತ್ನ-ಇವಕ್ಕೆಲ್ಲಾ ಬ್ರಾಹ್ಮಣ ನಾಯಕತ್ವದಿಂದ ಪ್ರತಿಭಟನೆ ಬರುತ್ತಿತ್ತೆಂಬ ಕಾರಣದಿಂದಾಗಿ ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿದರು. 1925 ರಲ್ಲಿ ಅವರು ಆತ್ಮಗೌರವ ಚಳುವಳಿಯನ್ನು ಪ್ರಾರಂಭಿಸಿದರು. ದಲಿತ ವರ್ಗದವರ ಹಕ್ಕುಬಾಧ್ಯತೆಗಳನ್ನು ರಕ್ಷಿಸುವುದೇ ಈ ಆಂದೋಲನದ ಗುರಿಯಾಗಿತ್ತು. ಆ ಕಾಲಕ್ಕೆ ತಮಿಳುನಾಡಿನಲ್ಲಿದ್ದ ಜಸ್ಟಿಸ್ ಪಕ್ಷದ ಹಾಗೂ ಈ ಆಂದೋಲನದ ಗುರಿಗಳಲ್ಲಿ ಹೆಚ್ಚುಕಡಿಮೆ ಸಾಮ್ಯತೆ ಇತ್ತು. 1933 ರಲ್ಲಿ ಅವರು ಬ್ರಿಟಿಷ್ ಆಡಳಿತದ ವಿರುದ್ದ ದಂಗೆ ಏಳಬೇಕೆಂದು ಜನರನ್ನು ಪ್ರೋತ್ಸಾಹಿಸಿದಾಗ ದಸ್ತಗಿರಿಯಾದರು. 1937 ರಲ್ಲಿ ಮೊತ್ತಮೊದಲಿಗೆ ಅವರು ಹಿಂದಿ ಭಾಷೆಯ ವಿರುದ್ಧ ಚಳುವಳಿಯ ನಾಯಕತ್ವ ವಹಿಸಿದ್ದರು. ರಾಜಾಗೋಪಾಲಾಚಾರಿಯವರ ಸರ್ಕಾರ ಅವರನ್ನು ಕಾರಾಗೃಹಕ್ಕೆ ಕಳುಹಿಸಿತು. ಅಲ್ಲಿದ್ದಾಗಲೇ ಅವರು ಜಸ್ಟಿಸ್ ಪಕ್ಷದ ಅಧ್ಯಕ್ಷರಾಗಿ ಆರಿಸಲ್ಪಟ್ಟರು. 1944 ರಲ್ಲಿ ಅವರು ಜಸ್ಟಿಸ್ ಪಕ್ಷವನ್ನು ದ್ರಾವಿಡ ಕಳಗಮ್ ಆಗಿ ಪುನರ್ರಚಿಸಿದರು. ಜಾತಿರಹಿತವಾದ ಸ್ವತಂತ್ರ ದ್ರಾವಿಡ ನಾಡನ್ನು ಸ್ಥಾಪಿಸುವುದೇ ಇದರ ಗುರಿಯಾಗಿತ್ತು. 1949ರಲ್ಲಿ ಅವರ ಅನುಯಾಯಿಗಳಲ್ಲಿ ಕೆಲವರು ಶಾಸನಸಭೆಗಳ ಸ್ಥಾನಗಳಿಗಾಗಿ ಚುನಾವಣೆಗಳಲ್ಲಿ ಭಾಗವಹಿಸಬೇಕೆಂಬ ಉದ್ದೇಶದಿಂದ ಸಿ.ಎನ್. ಅಣ್ಣಾದೊರೈ ಅವರ ನೇತೃತ್ವದಲ್ಲಿ ದ್ರಾವಿಡ ಕಳಗಮ್‍ನಿಂದ ಹೊರಬಂದು ದ್ರಾವಿಡ ಮುನ್ನೇಟ್ರ ಕಳಗಮ್ ಪಕ್ಷವನ್ನು ಸ್ಥಾಪಿಸಿದರು. ಆದರೂ ನಾಯಕರ ಪ್ರಭಾವ ಕಡಿಮೆ ಯಾಗಲಿಲ್ಲ. 1953ರಲ್ಲಿ ತಮಿಳುನಾಡಿನಲ್ಲಿ ಕಾಮರಾಜರ ನೇತೃತ್ವದಲ್ಲಿ ಸ್ಥಾಪಿತವಾದ ಕಾಂಗ್ರೆಸ್ ಸರಕಾರಕ್ಕೆ ಅವರು ಬೆಂಬಲ ನೀಡಿದರು. ಮುಂದೆ 1967ರಲ್ಲಿ ದ್ರಾವಿಡ ಮುನ್ನೇಟ್ರ ಕಳಗಮ್ ಅಧಿಕಾರ ವಹಿಸಿಕೊಂಡಾಗ ಅದಕ್ಕೂ ಪ್ರೋತ್ಸಾಹ ನೀಡಿದರು. ಆ ಪಕ್ಷದ ಜಯದಿಂದಾಗಿ ತಾವು ಕೈಗೊಂಡ ಕಾರ್ಯ ಸಫಲವಾಯಿತೆಂಬುದು ಅವರ ಎಣಿಕೆಯಾಗಿತ್ತು. ಅವರು ತಮ್ಮ ಜೀವಮಾನದಲ್ಲಿ ದ್ರಾವಿಡರ ಹಾಗೂ ಅವರ ಸಂಸ್ಕøತಿಯ ಪರವಾಗಿ ನಿಂತು, ಆರ್ಯ ಸಂಸ್ಕøತಿ, ಬ್ರಾಹ್ಮಣ ಸಮಾಜ, ಹಿಂದು ಧರ್ಮ, ಹಿಂದು ದೇವರುಗಳು, ಜನರ ಮೂಡನಂಬಿಕೆಗಳು ಇವುಗಳ ವಿರುದ್ದ ಅನೇಕ ಆಂದೋಲನಗಳ ನಾಯಕತ್ವ ವಹಿಸಿ ಅವನ್ನು ನಡೆಸಿದರು. ಮನುವಿನ ನಿಯಮಗಳು ಅಮಾನುಷ, ಪುರಾಣಗಳೆಲ್ಲಾ ಕಟ್ಟುಕಥೆಗಳು ಎಂದು ಅವರು ಸಾರಿದರು. ಜಾತೀಯತೆ, ಶಿಶುವಿವಾಹ,ವಿಧವೆಯರನ್ನು ಕುರಿತ ಕಟ್ಟುಪಾಡುಗಳು ಇವನ್ನೆಲ್ಲಾ ವಿರೋಧಿಸಿದರು. ದೇವರ ಮೂರ್ತಿಗಳನ್ನು ಒಡೆಯುವಂತೆ ಜನರನ್ನು ಪ್ರಚೋದಿಸಿದರು. ತಮಿಳುನಾಡು ತಮಿಳರಿಗಾಗಿ ಇರಬೇಕು. ದ್ರಾವಿಡ ಸ್ಥಾನದ ರಚನೆಯಾಗಬೇಕು. ಜಾತಿಮತ ಕುಲಗೋತ್ರಗಳಿಲ್ಲದ ಸಮಾಜದ ಸ್ಥಾಪನೆಯಾಗಬೇಕು ಎಂದು ಮುಂತಾಗಿ ಅವರು ಬೇರೆಬೇರೆ ಪ್ರಸಂಗಗಳಲ್ಲಿ ಘೋಷಿಸಿದರು. ಕುಡಿವರಸು, ಪುರಾಟ್ಟಿ, ವಿಡುದಲೈ ಮೊದಲಾದ ಪತ್ರಿಕೆಗಳ ಮೂಲಕ ಅವಕ್ಕೆ ಪ್ರಚಾರ ನೀಡಿದರು. 1971 ರಲ್ಲಿ ಮೂಢನಂಬಿಕೆ ನಿವಾರಣ ಸಮ್ಮೇಳನವನ್ನು ಅವರು ಸಂಘಟಿಸಿದರು. ಹಿಂದೂ ದೇವತೆಗಳಿಗಿದ್ದ ರಕ್ಷಣೆಯನ್ನು ಹಿಂತೆಗೆದುಕೊಳ್ಳ ಬೇಕೆಂಬುದಾಗಿ ಈ ಸಭೆ ಸರ್ಕಾರಕ್ಕೆ ಕರೆ ನೀಡಿತು. 1973ರ ಕೊನೆಯಲ್ಲಿ ಮದ್ರಾಸಿನಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಅವರು ಮಾತನಾಡುತ್ತಾ, ಮುಂದಿನ ವರ್ಷದ ಜನವರಿ 26 ರೊಳಗೆ ಜಾತಿ ಭೇದಭಾವವನ್ನು ಕೊನೆಗೊಳಿಸಲು ಸಂವಿಧಾನವನ್ನು ತಿದ್ದುಪಡಿ ಮಾಡಿದ್ದಲ್ಲಿ ದ್ರಾವಿಡ ಕಳಗಮ್ ಪ್ರತ್ಯೇಕ ತಮಿಳುನಾಡಿನ ಸ್ಥಾಪನೆಗೆ ಆಂದೋಲನ ಪ್ರಾರಂಭಿಸುವುದಾಗಿ ಕೇಂದ್ರ ಸರಕಾರಕ್ಕೆ ಅಂತಿಮ ಎಚ್ಚರಿಕೆಯಿತ್ತಿದ್ದರು. 1973ರ ಡಿಸೆಂಬರ್ 24ರಂದು ವೆಲ್ಲೂರಿನಲ್ಲಿ ಅವರ ದೇಹಾಂತವಾಯಿತು. ರಾಮಸ್ವಾಮಿ ನಾಯಕರ ಅಭಿಮಾನಿಗಳೂ ಅವರ ಚಳುವಳಿಯನ್ನು ದ್ವೇಷಿಸಿದವರೂ ಅನೇಕರು. ಆದರೆ ಸ್ವತಂತ್ರ ವಿಚಾರ, ಮೂಡನಂಬಿಕೆಯ ನಿರ್ಮೂಲನ, ಜಾತಿಭೇದರಹಿತ ಸಮಾಜದ ನಿರ್ಮಾಣ ಇವಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು ಅವರು.	
	    (ಜಿ.ಕೆಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ